ಕೃತಕ ರತ್ನಗಳು
ಆಮ್ಲಜನಕ-ಜಲಜನಕ ಜ್ವಾಲೆಯಲ್ಲಿ ಅಲ್ಯೂಮಿನಿಯಂ ಆಕ್ಸೈಡ್ ಎಂಬ ವಸ್ತುವನ್ನು ಕಾಸಿದಾಗ ಸಣ್ಣ ಹನಿಗಳ ರೂಪದಲ್ಲಿ ಮೈದಳೆಯುವ ವಸ್ತುಗಳು (ಆರ್ಟಿಫಿಷಿಯಲ್ ಜೆಮ್ಸ್). ಇವು ಘನೀಕರಿಸಿ ಕೃತಕ ರತ್ನಗಳಾಗುತ್ತವೆ. ಸೂಕ್ತ ಲೋಹ ಭಸ್ಮಗಳನ್ನು(ಆಕ್ಸೈಡುಗಳನ್ನು) ಸೇರಿಸುವುದರಿಂದ ನಾನಾ ಬಣ್ಣಗಳು ಉಂಟಾಗುತ್ತವೆ. ರಸಾಯನವಿಜ್ಞಾನದ ಪ್ರಗತಿಯೊಂದಿಗೆ ಕೃತಕ ರತ್ನಗಳ ಉತ್ಪಾದನೆಯೂ ಭರದಿಂದ ಸಾಗಿದೆ. ರತ್ನಗಳಿಗೆ ಇರುವ ಬೇಡಿಕೆ ಕೂಡ ಕೃತಕ ರತ್ನಗಳ ಪೂರೈಕೆಗೆ ಹೆಚ್ಚು ಬೆಂಬಲ ನೀಡಿದೆ.  1902ರಲ್ಲಿ ಫ್ರಾನ್ಸಿನ ಹೆಸರಾಂತ ರಸಾಯನವಿಜ್ಞಾನಿ ಎ-ವರ್ನೂಯಲ್ ಕೃತಕ ರತ್ನಗಳ ಸೃಷ್ಟಿಗೆ ಬುನಾದಿ ಹಾಕಿದ. ಅಲ್ಯುಮಿನಿಯಂ ಆಕ್ಸೈಡನ್ನು ಭಸ್ಮಮಾಡಿ ಜ್ವಾಲೆಯಲ್ಲಿ 20500 ಸೆ. ಉಷ್ಣತೆಯಲ್ಲಿ ಕಾಸಿದಾಗ ಕೆಳಗಿಟ್ಟ ಪಾತ್ರೆಯಲ್ಲಿ ಪೇರುಹಣ್ಣಿನ ಆಕಾರದ ಸ್ಫಟಿಕ ಮೈದಳೆದಿತ್ತು. ಅದಕ್ಕೆ ಅಲ್ಪಪ್ರಮಾಣದ ಕ್ರೋಮಿಯಂ ಬೆರೆಸಿದಾಗ ಅದು ಮಾಣಿಕ್ಯವನ್ನು ಹೋಲುವ ಸ್ಫಟಿಕವೆಂಬುದು ತಿಳಿದುಬಂತು. ಭಸ್ಮಕ್ಕೆ ಕಬ್ಬಿಣ ಮತ್ತು ಟೈಟಾನಿಯಂ ಆಕ್ಸೈಡನ್ನು ಮಿಶ್ರಣಮಾಡಿದಾಗ ನೈಜ ನೀಲದಂತೆ ಕಂಡುಬಂತು. ಈ ಕೃತಕ ರತ್ನಗಳಲ್ಲಿ ಆಂತರಿಕ ದೋಷಗಳಿಂದ ಮುಕ್ತವಾಗಿದ್ದುವು. ಕೆಲವು ಸ್ಪಿನಲ್ ಸ್ಫಟಿಕಗಳನ್ನು ಬಳಸಿ ಮಾಣಿಕ್ಯಗಳನ್ನೂ ನೀಲಿ ಸ್ಪಿನಲ್ ಬಳಸಿ ನೀಲವನ್ನೂ ಸಂಶ್ಲೇಷಿಸಲಾಗುತ್ತಿದೆ. ನಕ್ಷತ್ರಮಾಣಿಕ್ಯವನ್ನು ಸೃಷ್ಟಿಸುವುದೂ ಈಗ ಸಾಧ್ಯವಾಗಿದೆ. ಬೆಣಚು ಸ್ಫಟಿಕವನ್ನು ಬಳಸಿ ಕಾಬೂಷಾನ್ ಶೈಲಿಯಲ್ಲಿ ಕತ್ತರಿಸಿ ತಳದಲ್ಲಿ ಕೆಂಪುಬಣ್ಣ ಪ್ರತಿಫಲಿಸುವ ಫಲಕವನ್ನು 600 ಕೋನದಲ್ಲಿರಿಸಿ ಗೆರೆಎಳೆದರೆ ಸ್ಫಟಿಕ ನಕ್ಷತ್ರದಂತೆ ಬೆಳಕನ್ನು ಹೊಮ್ಮಿಸುತ್ತದೆ. ಸಂಶ್ಲೇಷಿತ ಮಾಣಿಕ್ಯ ಅಥವಾ ನೀಲಗಳಲ್ಲಿ ಬಣ್ಣ ಏಕಪ್ರಕಾರವಾಗಿ ಹಂಚಿಕೆಯಾಗಿರುವುದಿಲ್ಲ. ಗಾಳಿ ಗುಳ್ಳೆಗಳ ಗಾತ್ರವೂ ಬೇರೆಬೇರೆಯಾಗಿರುತ್ತದೆ. ಅಲ್ಲದೆ ಅವು ಕ್ರಮಬದ್ಧವಾಗಿ ಹಂಚಿಕೆಯಾಗಿರುವುದಿಲ್ಲ. ನಕ್ಷತ್ರ ಮಾಣಿಕ್ಯಗಳನ್ನು ಸೃಷ್ಟಿಸಿದರೂ ಅದರೊಳಗೆ ರೇಷ್ಮೆ ಹೊಳಪನ್ನು ಕೊಡುವುದು ಈವರೆಗೆ ಸಾಧ್ಯವಾಗಿಲ್ಲ.

	ಅಮೆರಿಕನ್ ಡೈಮಂಡ್ ಎಂದು ರತ್ನಾಭರಣ ಅಂಗಡಿಗಳಲ್ಲಿ ಪ್ರಸಿದ್ಧವಾಗಿರುವ ರತ್ನವೂ ಕೃತಕ ರತ್ನವೇ ಇದು ವಜ್ರವಲ್ಲ. ಆದರೆ ವಜ್ರದ ಅನೇಕ ಗುಣಗಳು ಇದರಲ್ಲಿವೆ. ಅಮೆರಿಕನ್ ಡೈಮಂಡ್ ಘನಾಕೃತಿಯ ಜಿರ್ಕೋನಿಯಂ ಆಕ್ಸೈಡ್. ಕಾಂತಿಯಲ್ಲಿ ವಜ್ರಕ್ಕೆ ಸಮೀಪವಾದ ರತ್ನ - ವಕ್ರೀಭವನಾಂಕ 2.18. ವಜ್ರದ ವಕ್ರೀಭವನಾಂಕ 2.42. ಅಮೆರಿಕನ್ ಡೈಮಂಡನ್ನು ಮೊದಲು ತಯಾರಿಸಿದ ಕೀರ್ತಿ ಸ್ಟ್ರಾಕಲ್‍ಬರ್ನ್ ಮತ್ತು ಚುಡೋಬ (1937) ಎಂಬ ವಿಜ್ಞಾನಿಗಳಿಗೆ ಸಲ್ಲುತ್ತದೆ.

	ಲೀಥಿಯಂ ಮಾಲಿಬ್ಡೇಟನ್ನು ಮಾತೃ ದ್ರವವಾಗಿ ಬಳಸಿ ಅದಕ್ಕೆ ಬೆರಿಲಿಯಂ ಆಕ್ಸೈಡ್ ಅಲ್ಯುಮಿನಿಯಂ ಆಕ್ಸೈಡ್, ಸಿಲಿಕಾ, ಕ್ರೋಮಿಯಂ ಬೆರಸಿ ಬಹುದೀರ್ಘಕಾಲ 18000ಫ್ಯಾ. ಉಷ್ಣತೆಯಲ್ಲಿ ಕಾಸಿ ಪಚ್ಚೆಯನ್ನು ಕೃತಕವಾಗಿ ಉತ್ಪಾದಿಸುತ್ತಾರೆ. ಕೆಂಪು ಗಾರ್ನೆಟ್ ಖನಿಜವನ್ನು ಬಳಸಿ ತಳದಲ್ಲಿ ಹಸುರು ಗಾಜನ್ನು ಬೆಸೆಯುವುದು, ಹಸುರು ವರ್ಣವನ್ನು ಲೇಪಿಸಿ ಮೇಲೆ ಮತ್ತು ಕೆಳಗೆ ನಿರ್ವರ್ಣ, ಶುದ್ಧ ಬೆಣಚಿನ ಸ್ಫಟಿಕ ಕೂಡಿಸುವುದರಿಂದಲೂ 'ಸೂಡೆ ಎಂದು ಕರೆಯಲಾದ ಕೃತಕ ಪಚ್ಚೆ ಉತ್ಪಾದಿಸುತ್ತಾರೆ. ಆದರೆ ಇಂಥವು ನೀರಿನಲ್ಲಿ ಬಣ್ಣ ಬಿಟ್ಟು ಕೊಡುತ್ತದೆ.

	ನೀರಿನ ಸಮ್ಮುಖದಲ್ಲಿ ಸಿಲಿಕಾ - ಅಲ್ಯೂಮಿನಿಯಂ ಮೇಲೆ ಹೈಡ್ರೋಫ್ಲೂರೋಸಿಲಿಕ್ ಆಮ್ಲವನ್ನು ಹಾಯಿಸಿ 50000 ಸೆ. ಉಷ್ಣತೆ ಒದಗಿಸಿದಾಗ ಕೃತಕ ಪುಷ್ಪರಾಗ ರೂಪುಗೊಳ್ಳುತ್ತದೆ.
ಈ ಕೃತಕ ಹರಳುಗಳಿಗೂ ಪ್ರಕೃತಿಯಲ್ಲಿ ಸಿಗುವ ಹರಳುಗಳಿಗೂ ಇರುವ ವ್ಯತ್ಯಾಸವನ್ನು ಸೂಕ್ಷ್ಮದರ್ಶಕದ ಸಹಾಯದಿಂದ ನೋಡಬಹುದು. ಕೃತಕ ಹರಳುಗಳು ಶುದ್ಧವಾದವು ಮತ್ತು ಅವುಗಳಲ್ಲಿರುವ ಅನಿಲದ ಗುಳ್ಳೆಗಳು ಗುಂಡಗೆ ಇರುತ್ತವೆ. ಪ್ರಕೃತಿಯಲ್ಲಿ ಸಿಗುವ ಹರಳುಗಳಲ್ಲಿ ಈ ಗುಳ್ಳೆಗಳು ಒಂದೇ ಸಮವಾಗಿರುವುದಿಲ್ಲ. ಕೃತಕ ರತ್ನಗಳನ್ನು ತಯಾರಿಸುವ ಇತರ ವಿಧಾನಗಳೆಂದರೆ ಅಭಿವಾಹ ಸಂಮಿಲನ(ಫ್ಲಕ್ಸ್ ಫ್ಯೂಶನ್) ಜಲೋಷ್ಣ ಸಂಸ್ಕರಣ (ಹೈಡ್ರೋಥರ್ಮಲ್ ಪ್ರೋಸೆಸ್) ಮತ್ತು ಸಂಯೋಜಿಸಿದ ಕಲ್ಲುಗಳು. (ಎನ್.ಎಸ್.ಕೆ., ಟಿ.ಆರ್.ಎ.)
ಪರಿಷ್ಕರಣೆ:
ಟಿ. ಆರ್. ಅನಂತರಾಮು
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ